ಮಿಷಿಗನ್

1 ಅಮೆರಿಕ ಸಂಯುಕ್ತ ಸಂಸ್ಥಾನಗಳ ಉತ್ತರದಲ್ಲಿರುವ ಒಂದು ರಾಜ್ಯ. 2 ಅದೇ ದೇಶದ ಇಂಡಿಯಾನ ರಾಜ್ಯದ ಉತ್ತರದಲ್ಲಿರುವ ಲಾ ಫೋರ್ಟ್ ವಿಭಾಗದ ಒಂದು ನಗರ. 3 ಉತ್ತರ ಅಮೆರಿಕಾದ ಪಂಚಮಹಾ ಸರೋವರಗಳ ಪೈಕಿ ಒಂದು.

	ಮಿಷಿಗನ್ ರಾಜ್ಯ : ಉತ್ತರ ಅಮೆರಿಕದ ಪಂಚಮಹಾ ಸರೋವರಗಳ ಪೈಕಿ ಮೂರರ (ಸುಪೀರಿಯರ್, ಹುರಾನ್ ಮತ್ತು ಮಿಷಿಗನ್) ನಡುವೆ ಎರಡು ಪರ್ಯಾಯದ್ವೀಪಗಳ ರೂಪದಲ್ಲಿ ಹಬ್ಬಿದೆ. ಮಿಷಿಗನ್ ಸರೋವರ ಎರಡು ಪರ್ಯಾಯದ್ವೀಪಗಳ ನಡುವೆ ಇದೆ.  ಈ ಎರಡೂ ಭೂಭಾಗಗಳ ನಡುವೆ ಹುರಾನ್ ಮತ್ತು ಮಿಷಿಗನ್ ಸರೋವರಗಳನ್ನು ಕೂಡಿಸುವ 6ಕಿ.ಮೀ. ಅಗಲದ ಮ್ಯಾಕನಾಕ್ ಜಲಸಂಧಿ ಇದೆ. ವಿಸ್ಕಾನ್ಸಿನ್ ರಾಜ್ಯ. ಸುಪೀರಿಯರ್ ಸರೋವರ. ಕೆನಡಾದ ಆಂಟೇರಿಯೊ ಪ್ರಾಂತ. ಹುರಾನ್ ಸರೋವರ-ಇವು ಉತ್ತರ ಪರ್ಯಾಯದ್ವೀಪದ ಮೇರೆಗಳು. ಹುರಾನ್ ಸರೋವರ. ಈರೀ ಸರೋವರ. ಒಹೈಯೊ ಮತ್ತು ಇಂಡಿಯಾನ ರಾಜ್ಯಗಳು. ಮಿಷಿಗನ್ ಸರೋವರ. ಕೆನಡದ ಕ್ವಿಬೆಕ್ ಪ್ರಾಂತ -ಇವು ದಕ್ಷಿಣ ಪರ್ಯಾಯ ದ್ವೀಪವನ್ನು ಸುತ್ತುವರಿದಿವೆ. ರಾಜ್ಯದ ವಿಸ್ತೀರ್ಣ 1,50,779 ಚ. ಮೀ. ಜನಸಂಖ್ಯೆ 92,58,000(1980). ರಾಜಧಾನಿ ಲ್ಯಾನ್‍ಸಿಂಗ್.

	ಮಿಷಿಗನ್ನಿನ ಉತ್ತರ ಪರ್ಯಾಯದ್ವೀಪ ಬೆಟ್ಟಗುಡ್ಡ ಪ್ರದೇಶ. ದಕ್ಷಿಣ ಪರ್ಯಾಯದ್ವೀಪ ಲಘು ಏರಿಳಿತಗಳಿಂದ ಕೂಡಿದ ಮೈದಾನ. ಉತ್ತರದಲ್ಲಿ ಹಿಂದೆ ಒತ್ತಾದ ಮರಗಳಿದ್ದವು. ಮರಕೊಯ್ಯವ ಕೈಗಾರಿಕೆ ಅಲ್ಲಿ ಬೆಳೆಯಿತು.  ಈಗ ಅಲ್ಲಿಯ ಕಾಡು ಬಹುತೇಕ ಬರಿದಾಗಿದೆ. ಮರನೆಡುವ ಕಾರ್ಯಕ್ರಮ ಜಾರಿಯಲ್ಲಿದೆ. ಪ್ರವಾಸಿಗರು ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. 1840ರ ದಶಕದಲ್ಲಿ ಅಲ್ಲಿ ಕಬ್ಬಿಣ ಮತ್ತು ತಾಮ್ರದ ಅದುರುಗಳ ನಿಕ್ಷೇಪ ಪತ್ತೆಯಾಯಿತು. ಅಲ್ಲಿಯ ಮಿಷಿಗನ್ ಗಿರಿಶ್ರೇಣಿಯ ಪ್ರದೇಶ ಈಗ ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ಪ್ರಮುಖಗಣಿಗಾರಿಕೆ ಕೇಂದ್ರವಾಗಿದೆ. ಅಮೆರಿಕದಲ್ಲಿ ಉತ್ಪಾದನೆಯಾಗುವ ಒಟ್ಟು ಕಬ್ಬಿಣ ಅದುರಿನಲ್ಲಿ ಶೇಕಡಾ 13ರಷ್ಟು ಭಾಗ ಅಲ್ಲಿಯದು. ಮೆಗ್ನಿಷಿಯಮ್ ಇಲ್ಲಿ ದೊರಕುವ ಇನ್ನೊಂದು ಪ್ರಮುಖ ಲೋಹ. ದಕ್ಷಿಣ ಪರ್ಯಾಯದ್ವೀಪದ ಮೈದಾನದಲ್ಲಿ ಮೆಕ್ಕೆಜೋಳ, ಹುಲ್ಲು. ಓಟ್ಸ್. ಗೋಧಿ, ಆಲೂಗಡ್ಡೆ ಹಣ್ಣು ಬೆಳೆಯುತ್ತವೆ. ದಕ್ಷಿಣ ಪರ್ಯಾಯದ್ವೀಪ ದೇಶದ ಪ್ರಮುಖ ಕೈಗಾರಿಕೆ ಪ್ರದೇಶವಾಗಿದೆ. ಇಲ್ಲಿರುವ ಪ್ರಮುಖಪಟ್ಟಣ ಡೆಟ್ರಾಯಿಟ್. ಇದು ಮೋಟರುವಾಹನಗಳ ಉತ್ಪಾದನೆಯ ಪ್ರಮುಖ ಕೇಂದ್ರ. ಇಲ್ಲಿ ವಿಮಾನ, ಸೇನಾ ಟ್ಯಾಂಕು. ಕೃತಕವಜ್ರ. ಔಷಧಿಗಳು, ರಾಸಾಯನಿಕ ಉಪಕರಣ ಮತ್ತು ಉಕ್ಕು ಕೈಗಾರಿಕೆಗಳೂ ಬೆಳೆದಿವೆ. ಸೇಂಟ್ ಕ್ಲೇರ್ ಮತ್ತು ಈರೀ ಸರೋವರಗಳನ್ನು ಕೂಡಿಸುವ, ಮಿಷಿಗನ್ ರಾಜ್ಯವನ್ನು ಕೆನಡದ ಅಂಟೇರಿಯೊ ಪ್ರಾಂತದಿಂದ ಬೇರ್ಪಡಿಸುವ ಡೆಟ್ರಾಯಿಟ್ ನದಿಯ ದಂಡೆಯ ಮೇಲಿರುವ ಈ ನಗರ ಪ್ರಮುಖ ವ್ಯಾಪಾರದ ಹಾಗೂ ಭೂಜಲ ವಾಯುಮಾರ್ಗಗಳ ಕೇಂದ್ರ. ಜನಸಂಖ್ಯೆ 12, 03.000 (1980). ಮಿಷಿಗನ್ ರಾಜ್ಯದ ರಾಜಧಾನಿಯಾದ ಲ್ಯಾನ್ ಸಿಂಗ್‍ನ ಜನಸಂಖ್ಯೆ 1,30,000 (1980). ಇದು ಗ್ರ್ಯಾಂಡ್ ನದಿಯ ದಂಡೆಯ ಮೇಲೆ ಆ ನದಿ ಸಿಡಾರ್ ನದಿಯೊಂದಿಗೆ ಕೊಡುವ ಎಡೆಯಲ್ಲಿದೆ. ಮೋಟರು ವಾಹನ. ರಾಸಾಯನಿಕಗಳು ಇಲ್ಲಿಯ ಮುಖ್ಯ ಕೈಗಾರಿಕೆಗಳು. 

	ಬಿಳಿಯರ ಆಗಮನಕ್ಕೆ ಮುಂಚೆ ಈಗಿನ ಮಿಷಿಗನ್ ರಾಜ್ಯದ ಪ್ರದೇಶ ಅರಣ್ಯಾವೃತ್ತವಾಗಿತ್ತು. ಜಲಸಮೃದ್ಧಿಯಿಂದ ಕೂಡಿತ್ತು. ಅನೇಕ ವನ್ಯಮೃಗಗಳಿಗೆ ಆವಾಸಸ್ಥಾನವಾಗಿತ್ತು. ಅಲ್ಲಿಯ ಮೂಲ ನಿವಾಸಿಗಳಾದ ಇಂಡಿಯನ್ನರು ಇಲ್ಲಿ ಬೇಟೆಯಾಡಿ ಜೀವಿಸುತ್ತಿದ್ದರು. ಈ ಪ್ರದೇಶವನ್ನು ಮೊದಲು ಪರಿಶೋಧಿಸಿದವರು ಫ್ರೆಂಚರು. ಅವರು ಇದನ್ನು ಕೆನಡದ ಮಹಾತುಪ್ಪಳು ಸಾಮ್ರಾಜ್ಯದ ಭಾಗವಾಗಿ ಮಾಡಿಕೊಂಡರು.  ಅನಂತರ ಇದು ಬ್ರಿಟಿಷರಿಗೆ ಸೇರಿತು.  ಅಮೆರಿಕನ್ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ನಿಷ್ಠೆ ತೋರಿಸಿತ್ತು.  1830ರಿಂದ ಈಚೆಗೆ ಅಲ್ಲಿ ವಿಫುಲ ಜನವಸತಿಯ ಬೆಳವಣಿಗೆಯಾಯಿತು. ಇದು ಅಮೆರಿಕ ಸಂಯುಕ್ತ ಸಂಸ್ಥಾನಗಳ 26ನೆಯ ರಾಜ್ಯವಾಗಿ ಪ್ರವೇಶ ಪಡೆದದ್ದು 1937ರಲ್ಲಿ.

	ಮಿಷಿಗನ್ ನಗರ : ಉತ್ತರ ಇಂಡಿಯಾನ ರಾಜ್ಯದ ಒಂದು ನಗರ.  ಲಾಪೋರ್ಟೆವಿಭಾಗದಲ್ಲಿದೆ.  ಮಿಷಿಗನ್ ಸರೋವರದ ದಕ್ಷಿಣ ದಂಡೆಯ ಮೇಲಿದೆ.  ಮೇಜರ್ ಐಸಾಕ್ ಎಲ್ಸ್‍ಟನ್ ಇದನ್ನು 1830ರಲ್ಲಿ ಸ್ಥಾಪಿಸಿದ.  ಹಿಂದೆ ಇದು ಮರದ ದಿಮ್ಮಿಯನ್ನು ಸಾಗಿಸುವ ಬಂದರು ಪಟ್ಟಣವಾಗಿತ್ತು.  ಈಗ ಒಂದು ಬಳಿಯ ಬನ್ರ್ಸ್ ರೇವಿನ ಮೇಲೆ ಉಕ್ಕು ಕೈಗಾರಿಕೆಯಿದೆ ಬೃಹತ್ ಮಿಷಿಗನ್ ಕೈಗಾರಿಕಾಸಂಕೀರ್ಣದಲ್ಲಿ ಇದೂ ಸೇರಿಕೊಂಡಿದೆ. ಮಹಾಸರೋವರಗಳ ಮೇಲೆ ನಿರ್ಮಾಣವಾದ ಪ್ರಥಮ ದ್ವೀಪಸ್ತಂಭಗಳ ಪೈಕಿ(1858) ಒಂದು ಇಲ್ಲಿದೆ. ಈಗ ಅಲ್ಲೊಂದು ವಸ್ತುಸಂಗ್ರಹಾಲಯವಿದೆ.  ಇಂಡಿಯಾನ ರಾಜ್ಯದ ಬಂದೀಖಾನೆ ಇಲ್ಲಿದೆ.  ಪಡ್ರ್ಯೂ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಇರುವುದು ಇಲ್ಲಿಗೆ 8 ಕಿಮೀ ದಕ್ಷಿಣದಲ್ಲಿರುವ ವೆಸ್ಟ್‍ವಿಲ್‍ನಲ್ಲಿ.

	ಮಿಷಿಗನ್ ಸರೋವರ : ಉತ್ತರ ಅಮೆರಿಕದ ಪಂಚಮಹಾ ಸರೋವರಗಳಲ್ಲಿ ಒಂದು; ವಿಸ್ತಾರದಲ್ಲಿ ಮೂರನೆಯದು. ಇವುಗಳ ಪೈಕಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮೇರೆಯೊಳಗೇ ಪೂರ್ತಿಯಾಗುವ ಸರೋವರ ಇದೊಂದೇ, ಮಿಷಿಗನ್, ಇಲಿನಾಯ್ ಇಂಡಿಯಾನ ರಾಜ್ಯಗಳು ಇದನ್ನು ಸುತ್ತುವರಿದಿವೆ. ಉತ್ತರದ ಮ್ಯಾ ಕಿನಾಕ್ ಜಲಸಂಧಿಯಿಂದ ಇದು ಹುರಾನ್ ಸರೋವರದೊಂದಿಗೆ ಸಂಪರ್ಕ ಪಡೆದಿದೆ. ದಕ್ಷಿಣೋತ್ತರವಾಗಿ ಈ ಸರೋವರದ ಉದ್ದ 517 ಕಿಮೀ. ಗರಿಷ್ಠ ಅಗಲ 189ಕಿಮೀ. ಗರಿಷ್ಠ ಆಳ 282ಮೀ. ಇದರಲ್ಲಿಯ ನೀರು ಹರಿವಿನ ವೇಗ ಕಡಿಮೆ, ಹರಿವು ದಕ್ಷಿಣಾಭಿಮುಖ, ಪಶ್ಚಿಮದ ಕಡೆ.  ಅಪ್ರದಕ್ಷಿಣವಾಗಿ ನೀರು ಸುತ್ತುತ್ತದೆ. ಸರೋವರದೊಳಕ್ಕೆ ಸುಮಾರು 100 ನದಿಗಳು ತೊರೆಗಳಾಗಿ ಹರಿದು ಬರುತ್ತವೆ.  ಕೆಲವು ಮಾತ್ರ ದೊಡ್ಡವು. ಸರೋವರದ ಉತ್ತರತುದಿಯಲ್ಲಿ ಇದರ ಬಹುತೇಕ ನಡುಗಡ್ಡೆಗಳಿವೆ. ಮಿಷಿಗನ್ ಸರೋವರದ ಮೂಲಕ ಸರಕು ಸಾಗಣೆ ವಿಶೇಷವಾಗಿ ನಡೆಯುತ್ತದೆ.  ಮಹಾಸರೋವರ ಸೆಂಟ್ಸ್ ಲಾರೆನ್ಸ್ ಜಲಮಾರ್ಗ ಸಾಗುವುದು ಇದರ ಮೂಲಕ. ಇದರ ದಕ್ಷಿಣ ದಂಡೆಯ ಮೇಲಿರುವ ಪ್ರಮುಖ ಪಟ್ಟಣ.  ಮಿಲ್ವಾಕೀ, ಗ್ರೀನ್ ಬೇ, ಮಿಷಿಗನ್‍ನಗರ, ವಾಕೆಗಾನ್, ಕೆನೋಷ, ರಾಸ್ವೆನ ಗ್ರ್ಯಾಂಡ್‍ಹೆವನ್ ಇವು ಇಲ್ಲಿಯ ಕೆಲವು ಬಂದರು ಪಟ್ಟಣಗಳು.
(ಎಚ್. ಎಸ್. ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ